ಪಿಲಿಕುಳಕ್ಕೆ ಸ್ವಾಗತ
ಪ್ರಮುಖ ಬಂದರು ನಗರವಾದ ಮಂಗಳೂರು, ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟ ಶ್ರೇಣಿಗಳ ನಡುವೆ ಇದ್ದು ಆರ್ಥಿಕ ಮತ್ತು ಕಲಿಕಾ ಚಟುವಟಿಕೆಗಳ ಕೇಂದ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದ್ದು ಇಲ್ಲಿಗೆ ಬಂದು ಹೋಗುವ  ಜನ ಸಂಖ್ಯ ಹಲವು ಪಟ್ಟು ಹೆಚ್ಚಾಗಿದೆ. ಪ್ರಾಚೀನ ಕಾಲದಿಂದಲೂ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿರುವ ನೈಸರ್ಗಿಕ ಬಂದರುಗಳಲ್ಲಿ ಮಂಗಳೂರು ಒಂದಾಗಿದೆ. ಇದಲ್ಲದೆ, ಮಂಗಳೂರು ಹಲವಾರು ಧಾರ್ಮಿಕ ಕೇಂದ್ರಗಳು, ರಮಣೀಯವಾದ ಕಡಲತೀರಗಳು, ನದಿಗಳು ಮತ್ತು ಜಲಪಾತಗಳು, ಚಾರಣಕ್ಕೆ ಯೋಗ್ಯವಾದ ಪರ್ವತಗಳು, ಸ್ವಾತಂತ್ರ್ಯ ಪೂರ್ವದ ಪ್ರಾಚೀನ ಸ್ಮಾರಕಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದಾಗಿ ಪ್ರವಾಸಿಗರಿಗೆ ಒಂದು ಆಕರ್ಷಣೆಯ ಸ್ಥಳವಾಗಿದೆ.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ನಗರವಾದ ಮಂಗಳೂರಿನಲ್ಲಿ ಸ್ಥಾಪಿತವಾಗಿರುವ ಪ್ರಮುಖ ಪರಿಸರ-ಶಿಕ್ಷಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಾಗಿದೆ.
ಪಿಲಿಕುಳವು ವೈವಿಧ್ಯಮಯ ವೈಶಿಷ್ಟ್ಯಗಳನ್ನು ಹೊಂದಿರುವ ಸಮಗ್ರ ಥೀಮ್ ಪಾರ್ಕ್, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕ ಆಸಕ್ತಿಯ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಈ ಉದ್ಯಾನವನವು 370 ಎಕರೆ ಪ್ರದೇಶದಲ್ಲಿ ಹರಡಿದೆ. ಯೋಜನೆಯು ಪ್ರಸ್ತುತ ಜೈವಿಕ ಉದ್ಯಾನವನ, ಅರ್ಬೊರೇಟಂ (ಸಸ್ಯಕಾಶಿ), ವಿಜ್ಞಾನ ಕೇಂದ್ರ, ಬೋಟಿಂಗ್ ಕೇಂದ್ರದೊಂದಿಗೆ ಲೇಕ್ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಗಾಲ್ಫ್ ಕೋರ್ಸ್‌ಗಳನ್ನು ಒಳಗೊಂಡಿದೆ. ಹೆರಿಟೇಜ್ ವಿಲೇಜ್, ಆಯುರ್ವೇದ ಹೆಲ್ತ್ ಥೆರಪಿ ಸೆಂಟರ್ ಮತ್ತು ಟೂರಿಸ್ಟ್ ಕಾಟೇಜ್‌ಗಳನ್ನು ಹೊಂದಿದೆ.
ಪಿಲಿಕುಳವು ಭಾರತದಲ್ಲಿ ಈ ರೀತಿಯ ಮೊದಲ ಯೋಜನೆಯಾಗಿದ್ದು ಎಲ್ಲಾ ಆಧುನಿಕ ಮನರಂಜನಾ ಸೌಲಭ್ಯಗಳೊಂದಿಗೆ ಈ ಪ್ರದೇಶದ ಸ್ಥಳೀಯ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಆರೋಗ್ಯಕರ ಅನುಭವವನ್ನು ಒದಗಿಸುವ ಪರಿಕಲ್ಪನೆಯಿಂದ ಪ್ರೇರಿತವಾಗಿದೆ.
ಜಾಗತಿಕವಾಗಿ ಗುರುತಿಸಲ್ಪಟ್ಟಿರುವ 34 ಜೈವಿಕ ವೈವಿಧ್ಯತೆಯ ಹಾಟ್ ಸ್ಪಾಟ್‌ಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಸಮೀಪದಲ್ಲಿರುವ ಪಿಲಿಕುಳದ ಹಲವು ವೈಶಿಷ್ಟ್ಯಗಳು ಈ ಪ್ರದೇಶದ ವಿಶಿಷ್ಟ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಪಿಲಿಕುಳವು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ಸ್ಥಳೀಯ ಪರಂಪರೆ ಮತ್ತು ಕರಾವಳಿ ಸಂಸ್ಕೃತಿಯನ್ನು ಸಂರಕ್ಷಿಸುವ ಪ್ರಯತ್ನ ಮಾಡುತ್ತಿದೆ.  ಸಂಕ್ಷಿಪ್ತವಾಗಿ ಹೇಳುವುದಾದರೆ, ಪಿಲಿಕುಳವು ಭಾರತದ ಒಂದು ಶೈಕ್ಷಣಿಕ ಮತ್ತು ಮನರಂಜನಾ ತಾಣವಾಗಿದೆ.  ಎಲ್ಲಾ ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.
 
×
ABOUT DULT ORGANISATIONAL STRUCTURE PROJECTS